ಸಿದ್ಧಲಿಂಗಯ್ಯ, ಟಿ
	1936-. ಪ್ರಸಿದ್ಧ ಚಲನಚಿತ್ರನಿದೇಶಕ. ತರೂರು ಲಿಂಗಣ್ಣ ಸಿದ್ಧಲಿಂಗಯ್ಯ ಎಂಬುದು ಇವರ ಪೂರ್ಣ ಹೆಸರು. ತುಮಕೂರು ಜಿಲ್ಲೆಯ ತರೂರು ಗ್ರಾಮದಲ್ಲಿ 1936 ಡಿಸೆಂಬರ್ 15 ರಂದು ಜನಿಸಿದರು. ಇವರ ತಂದೆ ಲಿಂಗಣ್ಣ, ತಾಯಿ ಸಿದ್ದಬಸಮ್ಮ.

	ಬಡತನದ ಬೇಗೆ ತಾಳಲಾರದೆ, ನಗರಕ್ಕೆ ಓಡಿ ಬಂದು ಮೈಸೂರು ನವ ಜ್ಯೋತಿ ಸ್ಟುಡಿಯೋದಲ್ಲಿ ಸಾಧಾರಣ ಕಾರ್ಮಿಕನಾಗಿ ಸೇರಿದರು. ಸ್ವಯಂ ಸ್ಫೂರ್ತಿಯಿಂದ ಸಿನಿಮಾ ರಂಗದ ವಿವಿಧ ವಿಭಾಗಗಳ ಪರಿಚಯ ಮಾಡಿಕೊಂಡರು. ನಿರ್ದೇಶನದ ಸೂಕ್ಷ್ಮಗಳÀ್ನು ಮನನ ಮಾಡಿಕೊಂಡರು. ಮದರಾಸಿಗೆ ತೆರಳಿ ಬಿ. ವಿಠಲಾಚಾರ್ಯರ ಸಹಾಯಕರಾದರು. ಮುಂದೆ ಹಲವಾರು ಖ್ಯಾತ ನಿರ್ದೇಶಕರ ಸಹಾಯಕರಾಗಿದ್ದು, ಕಲಿಯುತ್ತಾ ಹೋಗಿಯೆ ವಿಕ್ರಮವಾಗಿ ಬೆಳೆದರು. ಸಿದ್ಧಲಿಂಗಯ್ಯ ನವರು  ನಿರ್ದೇಶಿಸಿದ ಪ್ರಥಮ ಚಿತ್ರ ಮೇಯರ್ ಮುತ್ತಣ್ಣ (1969). ಬಾಳು ಬೆಳಗಿತು (1970), ನಮ್ಮ ಸಂಸಾರ (1971), ತಾಯಿದೇವರು (1971), ನ್ಯಾಯವೇ ದೇವರು (1971), ಬಂಗಾರದ ಮನುಷ್ಯ (1972), ದೂರದ ಬೆಟ್ಟ (1973), ಗೊರೂರು ರಾಮಸ್ವಾಮಿ ಐಯ್ಯಂಗಾರ್ಯರ ಕತೆ ಆಧಾರಿತ. ಬೂತಯ್ಯನ ಮಗ ಅಯ್ಯು (1974) ಹೇಮಾವತಿ (1977) - ಇವು ಇವರ ನಿರ್ದೇಶನದ ಇತರ ಚಿತ್ರಗಳು. ಇವರ ಆರನೆ ಚಿತ್ರ `ಬಂಗಾರದ ಮನುಷ್ಯ ಬೆಂಗಳೂರಿನಲ್ಲಿ ಏಕಪ್ರಕಾರವಾಗಿ ಎರಡು ವರ್ಷಗಳ ಕಾಲ ಪ್ರದರ್ಶನ ಕಂಡು ಕನ್ನಡ ಚಿತ್ರರಂಗದಲ್ಲಿ ದಾಖಲೆಯನ್ನೇ ಸ್ಥಾಪಿಸಿತು; ಇವರಿಗೆ ಉತ್ತಮ ನಿರ್ದೇಶಕ ಎಂಬ ಕೀರ್ತಿಯನ್ನು ತಂದುಕೊಟ್ಟಿತು. ಗೊರೂರು ರಾಮಸ್ವಾಮಿ ಅಯ್ಯಂಗಾರ್ ಅವರ ಬೂತಯ್ಯನ ಮಗ ಅಯ್ಯು ಎಂಬ ಕಥೆಯೊಂದನ್ನು ಆಧರಿಸಿ ತೆಗೆದ ಚಿತ್ರ ಇವರ ಹೆಸರನ್ನು ಚಿತ್ರರಂಗದಲ್ಲಿ ಶಾಶ್ವತಗೊಳಿಸಿತು. ಈ ಚಿತ್ರ ರಾಜ್ಯ ಪ್ರಶಸ್ತಿ ಗಳಿಸಿತಲ್ಲದೆ ಇವರಿಗೆ ಚಿನ್ನದ ಪದಕವನ್ನೂ ತಂದುಕೊಟ್ಟಿತು. ಎರಡು ಕೇಂದ್ರಗಳಲ್ಲಿ ರಜತೋತ್ಸವವನ್ನೂ ಹನ್ನೆರಡಕ್ಕೂ ಹೆಚ್ಚು ಕೇಂದ್ರಗಳಲ್ಲಿ ಶತದಿನೋತ್ಸವವನ್ನು ಆಚರಿಸಿತು. ಇಪ್ಪತ್ತನಾಲ್ಕು ವರ್ಷಗಳಲ್ಲಿ 20 ಚಿತ್ರಗಳನ್ನು ನಿರ್ಮಿಸಿದರು. ಗ್ರಾಮೀಣ ಬದುಕಿನ ಚಿತ್ರಣ ಸಿದ್ಧಲಿಂಗಯ್ಯ ಅವರಿಗೆ ಅತ್ಯಂತ ಪ್ರಿಯ. ಗ್ರಾಮೀಣ ಪರಿಸರ ನಾಯಕ ನಾಯಕಿಯರಿಗೆ, ಅವರ ಬದುಕಿಗೇ ಸೀಮಿತವಲ್ಲ. ಚಿತ್ರದಲ್ಲಿ ಇಡೀ ಗ್ರಾಮದ ಬದುಕಿನ ಸೊಬಗು, ಸಂಸ್ಕøತಿಯನ್ನು ಅನಾವರಣ ಗೊಳಿಸುವುದು ಸಿದ್ಧಲಿಂಗಯ್ಯನವರ ವಿಶೇಷ.

	ಚಿತ್ರಗೀತೆಗಳ ಬಳಕೆ ಕಲಾತ್ಮಕ, ಸನ್ನಿವೇಶಕ್ಕೆ ಪೂರಕ. `ಆಗದು ಎಂದು..... (ಬಂಗಾರದ ಮನುಷ್ಯ) `ನಮ್ಮ ಸಂಸಾರ ಆನಂದ ಸಾಗರ....... (ನಮ್ಮ ಸಂಸಾರ) `ಆಕಾಶವೇ ಬೀಳಲಿ ಮೇಲೆ (ನ್ಯಾಯವೇ ದೇವರು. `ಪ್ರೀತೀನೆ ಆದ್ಯಾವು....... (ದೂರದ ಬೆಟ್ಟ) `ಎಂಥಾ ಲೋಕವಯ್ಯಾ...... ನಾರದ ವಿಜಯ ಈ ಗೀತೆಗಳ ಜೋಡಣೆ ಕತೆಗೆ ಅಪ್ರಸ್ತುತ ವೆನಿಸುವುದಿಲ್ಲ. ಭಾವ ತೀವ್ರತೆಗೆ ಪೋಷಕವಾಗುವಂತೆ ಬಳಸಲಾಗಿದೆ. ಇವು ಕೆಲವು ಉದಾಹರಣೆಗಳು ಮಾತ್ರ.

	ಬಂಗಾರದ ಮನುಷ್ಯ ಚಿತ್ರದ ಗೀತೆ `ನಗು ನಗುತಾ ನಲಿ....... ಆರಂಭದಲ್ಲಿ ಬರುವ ಹಾಡು ಚಿತ್ರದ ಅಂತ್ಯ ದೃಶ್ಯದಲ್ಲಿ ವಾದ್ಯಮೇಳದಲ್ಲಿ ಕೇಳಿ ಬರುತ್ತದೆ. ನಾಯಕ ರಾಜೀವ ಬದುಕಿನಲ್ಲಿ ಎದುರಿಸಿವ ವ್ಯಂಗ್ಯ ವೈರುಧ್ಯಗಳ ಕಲಾತ್ಮಕವಾಗಿ ಅಭಿವ್ಯಕ್ತಿಗೊಂಡ ನಿದರ್ಶನ ಇದು. 

	ಕನ್ನಡ ಚಿತ್ರಗಳನ್ನು ಕನ್ನಡ ನಾಡಿನಲ್ಲೇ ರಮ್ಯವಾಗಿ ನಿರ್ಮಿಸಲು ಸಾಧ್ಯ ಎಂಬುದು ಸಿದ್ಧಲಿಂಗಯ್ಯನವರ ಅಭಿಮತ. ಇದನ್ನು ಇವರು ತಮ್ಮ ಚಿತ್ರಗಳ ಮೂಲಕ ಮನದಟ್ಟು ಮಾಡಿದ್ದಾರೆ. ಇವರಿಗೆ 1993-94ನೆಯ ಸಾಲಿನ ಪುಟ್ಟಣ್ಣ ಕಣಗಾಲ್ ಪ್ರಶಸ್ತಿ ದೊರೆತಿದೆ. ಸಿದ್ಧಲಿಂಗಯ್ಯನವರ ಪುತ್ರ `ಮುರಳಿ ಕನ್ನಡ ಮತ್ತು ತಮಿಳು ಚಿತ್ರ ರಂಗದ ನಟ.	
     (ಎಸ್.ಎಚ್.ಪಿ.; ಎಂ.ಬಿ.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ